ನೋಟ್‌ ಬ್ಯಾನ್ ಸಮಯದಲ್ಲಿ ಸುದ್ದಿಗಳಿಗಿಂತ ಹೆಚ್ಚು ವೈರಲ್ ಆಗಿ, ಜನರ ಬಾಯಲ್ಲಿ ತಿರುಗಾಡಿದ ‘ಚಿಪ್ಪು’ ಎಂಬ ಪದ ಇತ್ತೀಚೆಗೆ ಮತ್ತೆ ನನ್ನ ಗಮನ ಸೆಳೆಯಿತು.

“ಚಿಪ್ಪು ಉಂಟಾ… ಚಿಪ್ಪು…” ಎಂಬ ಧ್ವನಿವರ್ಧಕದ ಕೀರಲು ಧ್ವನಿ ಕಿವಿಗೆ ಬಿದ್ದೊಡನೆ, “ಕೊನೆಯಲ್ಲಿ ಸಿಗುವುದು ಚಿಪ್ಪೆ” ಎಂಬ ಅಪ್ಪ-ಅಮ್ಮ, ಗುರುಹಿರಿಯರ ಬುದ್ಧಿಮಾತುಗಳೂ, ಗೆಳೆಯರ ವ್ಯಂಗ್ಯ ಮಾತುಗಳೂ ಎಲ್ಲವೂ ಸ್ಮೃತಿಪಟಲದಲ್ಲಿ ಹಾಗೆಯೇ ಹಾದುಹೋಯಿತು.

ಶ್ರಮಪಟ್ಟು ಕೊನೆಯಲ್ಲಿ ಫಲಿತಾಂಶ ಸಿಗದಾಗ, ಈ ಮಾತು ಹಾಗೆಯೇ ಹಾರಿ ಬಂದು ಬೀಳುತ್ತಿತ್ತು. “ಚಿಪ್ಪಿನ ಬೆಲೆಗೂ ಇಲ್ಲ” ಎಂಬ ಮಾತು ಕೂಡ ಆಗಾಗ ಕೇಳಿಸಿಕೊಳ್ಳುತ್ತಿತ್ತು. ಅಂದಿನ ಕಾಲದಲ್ಲಿ ‘ಚಿಪ್ಪು’ ಅಂದರೆ — ಉಪಯೋಗವಿಲ್ಲದ್ದು, ಬೆಲೆ ಇಲ್ಲದ್ದು, ಕೊನೆಯಲ್ಲಿ ಉಳಿಯುವ ವ್ಯರ್ಥವೆಂಬ ಅರ್ಥವೇ ಗಟ್ಟಿಯಾಗಿ ನೆಲೆಸಿತ್ತು.

ಹಾಗಂತ, ಹಿಂದಿನ ಕಾಲದಲ್ಲಿ ಚಿಪ್ಪು ಬಹಳ ಉಪಯೋಗಕರವಾಗಿರಲಿಲ್ಲ ಎನ್ನುವುದು ಸರಿಯಲ್ಲ. ಅಡುಗೆ ಬಡಿಸುವ ಸೌಟಾಗಿ, ಲೋಟಗಳಾಗಿ, ಸಂಗ್ರಾಹಕಗಳಾಗಿ, ಒಲೆ ಉರಿಸುವ ಇಂಧನವಾಗಿಯೂ ಇದನ್ನು ಬಳಸುತ್ತಿದ್ದರು. ಮಕ್ಕಳಿಗಂತೂ ಆಟದ ಅಡುಗೆ ಮನೆಯ ಪ್ರಮುಖ ಪಾತ್ರೆಗಳು ಈ ಚಿಪ್ಪುಗಳೇ ಆಗಿದ್ದವು. ಗಟ್ಟಿತನದಲ್ಲಿ ಪ್ಲಾಸ್ಟಿಕ್ ಗಿಂತಲೂ ಮಿಗಿಲಾದ ಈ ಪರಿಸರ ಸ್ನೇಹಿ ಚಿಪ್ಪುಗಳು, ಮಕ್ಕಳ ತಕ್ಕಡಿಯಲ್ಲಿ ತೇಲಾಡುತ್ತಾ, ಕಾಸಿಲ್ಲದ ಕಾಲದಲ್ಲಿ ಮಕ್ಕಳಿಗೆ ಮನೋರಂಜನೆ ನೀಡುತ್ತಿದ್ದವು. ಅದೆಲ್ಲದಕ್ಕೂ ಮಿಗಿಲಾಗಿ, ಬಿಸಿಲು, ಗಾಳಿ, ಮಳೆ ಯಾವುದಕ್ಕೂ ಅಂಜದೆ, ಮೊಳಕೆಯೊಡೆಯುವವರೆಗೂ ತನ್ನೊಳಗಿನ ಜೀವವನ್ನು ಕಾಪಾಡಿಕೊಳ್ಳುವ ಬಲಿಷ್ಠ ರಕ್ಷಾಕವಚದಂತಿರುವ ಚಿಪ್ಪು ಪ್ರಕೃತಿಯ ಅದ್ಭುತ ವ್ಯವಸ್ಥೆಯನ್ನೇ ತೋರಿಸುತ್ತದೆ.

ಆದರೆ ಇಂದಿನ ದೃಶ್ಯ ಮಾತ್ರ ಸಂಪೂರ್ಣ ಬೇರೆ. ಒಮ್ಮೆ ಕಸದ ಬುಟ್ಟಿಗೆ ಹೋಗುತ್ತಿದ್ದ ಚಿಪ್ಪು, ಇವತ್ತು ಮಾರುಕಟ್ಟೆಯಲ್ಲಿ ಬೆಲೆ ಕೇಳುವ ಮಟ್ಟಕ್ಕೆ ಬಂದಿದೆ. ಇಂಧನವಾಗಿಯೂ, ಚಾರ್ಕೋಲ್ ಆಗಿಯೂ, ನೀರು ಶುದ್ಧೀಕರಣಕ್ಕೆ ಬೇಕಾಗುವ ಪದಾರ್ಥವಾಗಿಯೂ, ಅಲಂಕಾರಿಕ ವಸ್ತುಗಳಾಗಿ ಚಿಪ್ಪು ಹೊಸ ಜೀವನ ಪಡೆದಿದೆ.

ಹಿಂದೆ “ಚಿಪ್ಪಿನ ಬೆಲೆಗೂ ಇಲ್ಲ” ಎಂದು ತಳ್ಳಿಬಿಟ್ಟದ್ದೇ, ಇವತ್ತು “ಚಿಪ್ಪಿಗೆ ಎಷ್ಟು?” ಎಂದು ಕೇಳುವ ಮಟ್ಟಕ್ಕೆ ಬಂದಿದೆ.

ಈ ಬದಲಾವಣೆ ನೋಡಿದ ಮೇಲೆ, “ಕೊನೆಯಲ್ಲಿ ಸಿಗೋದು ಚಿಪ್ಪು” ಎಂಬ ಮಾತಿನ ಅರ್ಥವೇ ಸ್ವಲ್ಪ ಬದಲಾಗಿದೆ ಅನಿಸುತ್ತದೆ. ಈಗ ಕೊನೆಯಲ್ಲಿ ಸಿಗೋದು ಚಿಪ್ಪಾದ್ರೂ, ಅದಕ್ಕೂ ಬೆಲೆ ಇದ್ದರೆ — ಅದನ್ನು ವ್ಯರ್ಥ ಅಂತ ಹೇಗೆ ಹೇಳಬಹುದು? ಬಹುಶಃ, ಜೀವನವೂ ಇದೇ ಪಾಠ ಹೇಳುತ್ತಿದೆಯೇನೋ — ನಾವು ಅಲ್ಪವೆಂದುಕೊಂಡದ್ದರಲ್ಲಿ ಕೂಡ ಒಂದು ಮೌಲ್ಯ ಇರುತ್ತದೆ.

ಏನೇ ಇರಲಿ… ಈ ಚಿಪ್ಪಿನ ವಿಷಯ ಮತ್ತೆ ನೆನಪಿಸಿದೆ ಅಂತ ಟಿವಿ ಚಾನಲ್‌ಗಳು ಬೇಜಾರ್ ಆಗದಿದ್ದರೆ ಸಾಕು. ಇಲ್ಲದಿದ್ದರೆ, “ಕೆಲಸವಿಲ್ಲದವನು — ಚಿಪ್ಪು ಹಿಡಿದು ಕುಳಿತ!” ಅಂತ ನನ್ನ ಮೇಲೆಯೇ ಕಾರ್ಯಕ್ರಮ ಮಾಡಿಬಿಡ್ತಾರೆ!

-ಸಂತೋಷ್ ಎಮ್. ಕುಮಾರ್, ಮೊಗೇರಿ